ಓಸಾಕ: ಜಪಾನಿನ ಅತ್ಯಂತ ಪುರಾತನ ನಗರಗಳಲ್ಲೊಂದು. ಗಾತ್ರದಲ್ಲಿ ಜಪಾನಿನಲ್ಲೇ ಎರಡನೆಯದು; ವಿಸ್ತೀರ್ಣದಲ್ಲಿ ಮೂರನೆಯದು. ವಾಣಿಜ್ಯ ಮತ್ತು ಕೈಗಾರಿಕಾ ಕೆಂದ್ರ. ಇದೇ ಹೆಸರಿನ ನಗರಪ್ರಾಂತ್ಯದ ಮುಖ್ಯಸ್ಥಳ. ಓಸಾಕ ಕೊಲ್ಲಿಯ ಮೇಲೆ, ಯೋಡೋ ನದಿಯ ಮುಖದ ಬಳಿ ಇದೆ (ಉತ್ತರ ಅಕ್ಷಾಂಶ 300 32’, ಪುರ್ವ ರೇಖಾಂಶ 1350). ಕೋಬೆ ನಗರ ಇರುವುದು ಇದರಿಂದ ಪಶ್ಚಿಮಕ್ಕೆ 8 ಮೈ. ದೂರದಲ್ಲಿ. 
ಪುರ್ವದಲ್ಲಿ ಇದು ನಾನಿವ ಅಥವಾ ಪ್ರಕ್ಷುಬ್ದ ಅಲೆಗಳು ಎಂಬ ಹೆಸರಿನ ಒಂದು ಸಣ್ಣ ಹಳ್ಳಿಯಾಗಿತ್ತು. ಪ್ರ.ಶ. 300ರ ಸುಮಾರಿನಲ್ಲಿ ಓಜಿನ್ ಚಕ್ರವರ್ತಿನಿ ಇದರ ಎದುರಿಗಿನ ಬೆಟ್ಟದ ಮೇಲೆ ಅರಮನೆ ಕಟ್ಟಿಸಿದಳು. 16ನೆಯ ಶತಮಾನದಲ್ಲಿ ಹಿಡೆಯೋಷಿ ಇದನ್ನು ಬೆಳೆಸಿ ಇಲ್ಲಿ ದುರ್ಗವೊಂದನ್ನು ಕಟ್ಟಿಸಿದ. 1583ರಲ್ಲಿ ಇದು ಆತನ ರಾಜಧಾನಿಯಾಯಿತು. 1868ರಲ್ಲಿ ಈ ದುರ್ಗ ಬೆಂಕಿಗೆ ಆಹುತಿಯಾದಾಗ ಸಿಮೆಂಟಿನಿಂದ ಇದನ್ನು ಮತ್ತೆ ನಿರ್ಮಿಸಲಾಯಿತು. 1900ರಲ್ಲಿ ಈ ನಗರದ ಜನಸಂಖ್ಯೆ 8,81,000. ಸಾರಿಗೆ ಸಂಪರ್ಕಕ್ಕೆ ಅನೇಕ ಕಾಲುವೆಗಳನ್ನೆ ಅವಲಂಬಿಸಿದ್ದು, ಜಪಾನಿನ ವೆರಿಸ್ ಎನಿಸಿಕೊಂಡಿದ್ದ ಈ ನಗರ 20ನೆಯ ಶತಮಾನದ ಆರಂಭದ ವೇಳೆಗೆ ಪಾಶ್ಚಾತ್ಯ ಪಟ್ಟಣಗಳ ಮಾದರಿಯಲ್ಲಿ ಪರಿವರ್ತನೆಗೊಳ್ಳಲಾರಂಭಿಸಿತು. ಕಾಲುವೆಗಳ ಪ್ರಾಮುಖ್ಯವೂ ತಗ್ಗಿತು. 1930ರ ವೇಳೆಗೆ ಇದು ವಿಶ್ವದ ಆರನೆಯ ಪಟ್ಟಣವೆನೆಸಿಕೊಂಡಿತು. ಆಗ ಇದರ ಜನಸಂಖ್ಯ 24,53,000. ಈಗ ಇದು ಪೌರಸ್ತ್ಯ ಜಗತ್ತಿನ ಬೃಹತ್ತಮ ಕೈಗಾರಿಕಾ ನಗರ. ದಿಗಂತದಿಂದ ಮೇಲೆದ್ದ ಹೊಗೆ ಉಗುಳುವ ಸಾವಿರಾರು ಕಾರ್ಖಾನೆಗಳು ತಲೆಯೆತ್ತಿವೆ. 1940ರ ವೇಳೆಗೆ ಇಲ್ಲಿ 5,800 ಕಾರ್ಖಾನೆಗಳಿದ್ದುವು. ಇವುಗಳ ವಾರ್ಷಿಕ ಉತ್ಪನ್ನದ ಮೌಲ್ಯ 37,75,00,000 ಡಾಲರ ಆಗಿತ್ತು. ಹತ್ತಿ, ಜವಳಿ, ಮೋಟಾರು, ರಸಾಯನ ಪದಾರ್ಥ, ಔಷಧಿ, ಪ್ರಸಾಧನ ಸಲಕರಣೆಗಳು (ಟಾಯ್ಲೆಟ್ ಗುಡ್ಸ್‌), ಯಂತ್ರಸ್ಥಾವರ (ಪ್ಲಾಂಟ್), ಮುದ್ರಣಯಂತ್ರ, ರಟ್ಟು ಕಟ್ಟುವ ಯಂತ್ರ ಮುಂತಾದವು ಇಲ್ಲಿ ತಯಾರಾಗುತ್ತವೆ. ಆರಂಭದಲ್ಲಿ ಓಸಾಕದ ರಫ್ತಿನಲ್ಲಿ ಬಹು ಭಾಗ ಕೋಬೆ ಬಂದರಿನ ಮೂಲಕ ಸಾಗುತ್ತಿತ್ತು. ಆದರೆ ಎರಡನೆಯ ಮಹಾಯುದ್ಧಕ್ಕೆ ಮೊದಲೇ ಓಸಾಕದ ಬಂದರು ಅಭಿವೃದ್ಧಿಹೊಂದಿ, ಅದರ ಆಮದು ರಫ್ತುಗಳೆಲ್ಲ ಬಹುತೇಕ ಈ ಬಂದರಿನ ಮೂಲಕವೇ ಸಾಗಲಾರಂಭವಾದುವು. ಇದಕ್ಕಾಗಿ 1,200 ಎಕರೆಗಳಷ್ಟು ನೆಲವನ್ನು ಸಮುದ್ರದಿಂದ ಪುನರ್ವಶಪಡಿಸಿಕೊಳ್ಳಲಾಯಿತು. ಇಂದು ಓಸಾಕ ಜಪಾನಿನ ಬೃಹತ್ತಮ ಬಂದರಗಳಲ್ಲೊಂದು.

ಓಸಾಕ ಸೌಂದರ್ಯ ಕ್ಷೇತ್ರವೇನಲ್ಲ. ಆದರೆ ನಾಗರಿಕ ಆಕರ್ಷಣೆಗಳೂ ಟಂಕಸಾಲೆ, ವಾಣಿಜ್ಯ ವಸ್ತುಪ್ರದರ್ಶನಾಲಯ ಮತ್ತು ಉದ್ಯಾನಗಳೂ ಇವೆ. ಟಿನ್ನೋಜಿ ಉದ್ಯಾನ 56 ಎಕರೆಗಳ ಪ್ರದೇಶ. ಇಲ್ಲಿ ಮೃಗಾಲಯ, ಸಸ್ಯಕ್ಷೇತ್ರ, ಟೆನಿಸ್ ಕ್ರೀಡಾರಂಗ, ಕತ್ತಿವರಸೆಯ ಭವನ, ಮನೋರಂಜನೆಯ ಕೇಂದ್ರ ಇವೆಲ್ಲ ಉಂಟು. ಇದು ಜಪಾನಿ ರಂಗಶಾಲೆಗಳ ತವರು. ಗೊಂಬೆಯಾಟದ ರಂಗಶಾಲೆ (ಬುನ್ರಾಕು) ಬಲು ಪ್ರಖ್ಯಾತ. ಓಸಾಕ ವಿಶ್ವವಿದ್ಯಾನಿಲಯ, ಓಸಾಕ ಪೌರಸಭೆ ವಿಶ್ವವಿದ್ಯಾನಿಲಯ, ಓಸಾಕ ಆರ್ಥಿಕ ವಿಶ್ವವಿದ್ಯಾನಿಲಯ, ಓಸಾಕ ಎಂಜಿನಿಯರಿಂಗ್ ವಿಶ್ವವಿದ್ಯಾನಿಲಯ. ಓಸಾಕ ವೈದ್ಯ ವಿಶ್ವವಿದ್ಯಾನಿಲಯ, ಓಸಾಕ ವಿದೇಶೀ ಭಾಷೆಗಳ ವಿಶ್ವವಿದ್ಯಾನಿಲಯ ಮುಂತಾದ ಅನೇಕ ವಿದ್ಯಾಸಂಸ್ಥೆಗಳು ಇಲ್ಲಿವೆ. ಎರಡನೆಯ ಮಹಾಯುದ್ಧ ಕಾಲದಲ್ಲಿ ಜಪಾನಿನ ಇತರ ನಗರಗಳಂತೆ ಇದೂ ದಾಳಿಗಳಿಗೆ ಗುರಿಯಾಗಿತ್ತು. 1940ರ ಅನಂತರ ಜನಸಂಖ್ಯೆ ಶೀಘ್ರವಾಗಿ ಇಳಿಯಲಾರಂಭಿಸಿತು. ಚೇತರಿಸಿಕೊಳ್ಳುವುದು ಬಲು ನಿಧಾನವೇ ಆಯಿತು. 1960ರಲ್ಲಿ ಇದರ ಜನಸಂಖ್ಯೆ 30,11,563. ಏಷ್ಯ ಖಂಡದೊಡನೆ ವ್ಯಾಪಾರದ ಇಳಿತ, ಸರ್ಕಾರದ ಹತೋಟಿಕ್ರಮಗಳ ಫಲವಾಗಿ ಟೋಕಿಯೋ-ಯೋಕೊಹಾಮ ಪ್ರದೇಶದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ-ಇವು ಈ ನಗರದ ಮಂದ ಚೇತರಿಕೆಗೆ ಕಾರಣಗಳು. ನಗರದ ವಾಣಿಜ್ಯ ಕೇಂದ್ರವಿರುವುದು ದುರ್ಗದ ಭಾಗದಲ್ಲಿ. ಕೈಗಾರಿಕೆಗಳು ಸಮುದ್ರದಿಂದ ಪುನರ್ವಶವಾದ ಪ್ರದೇಶದಲ್ಲೂ ಯೋಡೋ ನದಿಯ ತಗ್ಗು ದಂಡೆಯ ಮೇಲೂ ಸಂದಣಿಗೊಂಡಿವೆ. ಕೋಬೆ, ನಿಷಿನೋಮಿಯಾ ಅಮಾಗಾಸಾಕಿ, ಸಾಕೈ, ಕೈಜುಕ, ಕಿಷಿವಾಡಾ ಮುಂತಾದ ನಗರಗಳ ಮತ್ತು ಉಪನಗರಗಳ ಕೈಗಾರಿಕಾ ಪಟ್ಟಿಗೆ ಓಸಕವೇ ಕೇಂದ್ರ. ಇದು ಪಶ್ಚಿಮ ಜಪಾನಿನ ಹಣಕಾಸಿನ ಮತ್ತು ವಾಣಿಜ್ಯದ ಮುಖ್ಯ ಪಟ್ಟಣ. ಬೃಹದ್ ಬ್ಯಾಂಕುಗಳೂ ವ್ಯಾಪಾರ ಸಂಸ್ಥೆಗಳೂ ಪಲಸರಕಿನಂಗಡಿಗಳೂ, ಒಟ್ಟು ವ್ಯಾಪಾರದಂಗಡಿಗಳೂ ಇಲ್ಲಿ ಕಿಕ್ಕಿರಿದಿವೆ. ಇದರ ಹತ್ತಿರದಲ್ಲೆ ಆಧುನಿಕ ವಿಮಾನ ನಿಲ್ದಾಣವನ್ನೂ ನೆಲೆಗೊಳಿಸಲಾಗಿದೆ. 

1970ರ ಎಕ್ಸ್‌ಪೋ ಪ್ರದರ್ಶನ ನಡೆದಿದ್ದು ಈ ನಗರದ ಬಳಿಯಲ್ಲೆ (ನೋಡಿ- ಎಕ್ಸ್‌ಪೊ).	(ಜಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ